ಅಮಾನುಲ್ಲಾ ಖಾನ್ 
	ಆಫ್ಘಾನಿಸ್ಥಾನದ ಅಮೀರ್ ಹಬೀಬುಲ್ಲಾ ಖಾನನ ಮಗ (1892-): ತಂದೆಯ ಕಾಲದಲ್ಲಿ ಕಾಬುಲಿನಲ್ಲಿ ರಾಜಪ್ರತಿನಿಧಿಯಾಗಿ ಆಳುತ್ತಿದ್ದ. 1919ರಲ್ಲಿ ಹಬೀಬುಲ್ಲಾ ಖಾನನ ಕೊಲೆಯಾದ ಕೂಡಲೆ ತನ್ನ ಚಿಕ್ಕಪ್ಪ, ಅಣ್ಣ ಇಬ್ಬರ ಹಕ್ಕನ್ನೂ ಕಡೆಗಣಿಸಿ ತಾನೇ ಅಮೀರನೆಂದು ಘೋಷಿಸಿದ. ಆಫ್ಗನರಿಗೆ ಆಗ ಬೇಕಾಗಿದ್ದದ್ದು ಬ್ರಿಟಿಷರ, ಮತ್ತಿತರ ಪರಕೀಯರ ಕೋಟಲೆಯಿಂದ ತಪ್ಪಿಸಿಕೊಂಡು ಸ್ವತಂತ್ರರಾಗಿರಬೇಕೆಂಬುದು. ಅದಕ್ಕನುಗುಣವಾಗಿ ಅಮೀರ ಇನ್ನು ಮುಂದೆ ಆಫ್ಘಾನಿಸ್ಥಾನ ಸರ್ವಸ್ವತಂತ್ರರಾಷ್ಟ್ರವೆಂದು ಘೋಷಿಸಿ ಇದಕ್ಕೊಪ್ಪಬೇಕೆಂದು ಬ್ರಿಟಿಷರಿಗೆ ತಿಳಿಸಿದ. ಬ್ರಿಟಿಷರು ಒಪ್ಪಲಿಲ್ಲ. ಯುದ್ಧ ಪ್ರಾರಂಭವಾಯಿತು. ಅಲ್ಲಲ್ಲಿ ಸಣ್ಣಪುಟ್ಟ ಕದನಗಳಾಗಿ, ಆಫ್ಘಾನಿಸ್ಥಾನ ಸ್ವತಂತ್ರರಾಷ್ಟ್ರವೆಂದು ಬ್ರಿಟಿಷರು ಘೋಷಿಸಿದರು. ಅಮಾನುಲ್ಲಾ, ತಾನು ವಂಶಾನುಗತವಾಗಿ ರಾಜ್ಯವಾಳುವ ದೊರೆ ಎಂದು ಘೋಷಿಸಿದ. ಆಫ್ಘನರಲ್ಲಿ ಸಮಾಜಸುಧಾರಣೆಯಾಗಬೇಕು ಎಂಬ ಆಸೆ ಅವನಿಗೆ. ಪಾಶ್ಚಾತ್ಯ ರೀತಿಯ ಸ್ತ್ರೀ ವಿದ್ಯಾಭ್ಯಾಸ ಮತ್ತು ಸ್ತ್ರೀಸ್ವಾತಂತ್ರ್ಯ ಚಳವಳಿಗೆ ಕೈಹಾಕಿದ. ಆದರೆ ಪ್ರಗತಿ ವಿರೋಧಿಗಳಾದ ಆಫ್ಘನರು ಇದನ್ನು ವಿರೋಧಿಸಿದರು. ಈ ವಿರೋಧ ಬಲಗೊಂಡು 1929ರಲ್ಲಿ ಅಮೀರ ಪದಚ್ಯುತನಾದ.    							
(ಎಚ್.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ